ಜೀಯಮ್
ರೋಸೆóಸೀ ಕುಟುಂಬಕ್ಕೆ ಸೇರಿದ ಒಂದು ಅಲಂಕಾರ ಸಸ್ಯ. ಸಮಶೀತೋಷ್ಣವಲಯಗಳ ಮೂಲವಾಸಿ.  ಸುಮಾರು 50 ಪ್ರಭೇದಗಳನ್ನು ಒಳಗೊಂಡಿದೆ.  ಇವುಗಳಲ್ಲಿ ಅನೇಕವು ಸುಂದರವಾದ ಕೆಂಪು, ಬಿಳಿ ಮುಂತಾದ ವರ್ಣರಂಜಿತ ಹೂಗಳನ್ನು ಬಿಡುವುದರಿಂದ ಇವನ್ನು ಕುಂಡಸಸ್ಯ, ಅಂಚುಸಸ್ಯ ಮತ್ತು ಕಲ್ಲೇರಿ ಸಸ್ಯಗಳಾಗಿ ಉದ್ಯಾನಗಳಲ್ಲಿ ಬೆಳೆಸುವರು.  ಹಲವು ಪ್ರಭೇದಗಳ ಬೇರುಗಳಿಗೆ ಔಷಧಿ ಮಹತ್ವ ಉಂಟು.  ಬ್ರಿಟನ್, ಯೂರೋಪ್, ಭಾರತ, ಉತ್ತರ ಹಾಗೂ ದಕ್ಷಿಣ ಅಮೆರಿಕಗಳಲ್ಲಿ ಸ್ವಾಭಾವಿಕವಾಗಿ ಬೆಳೆಯುತ್ತದೆ.  ಇದು ಸುಮಾರು 30-90 ಸೆಂ.ಮೀ ಎತ್ತರಕ್ಕೆ ಬೆಳೆಯುವ ಬಹುವಾರ್ಷಿಕ ಪರ್ಣಸಸಿ.  ಇದರಲ್ಲಿ ಬೇರುತಾಳಿನಿಂದ ಹುಟ್ಟುವ ಎಲೆಗಳೂ ಕಾಂಡದಮೇಲೆ ಮೂಡುವ ಎಲೆಗಳೂ ಉಂಟು.  ಬೇರಿನಿಂದ ಹೊರಡುವ ಎಲೆಗಳು ದೊಡ್ಡ ಗಾತ್ರದವು.  ಕಾಂಡದ ಮೇಲಿನವು ಚಿಕ್ಕವು.  ಎರಡು ಬಗೆಯವೂ ಹಲವಾರು ಹಾಲೆಗಳಾಗಿ ವಿಭಾಗಗೊಂಡಿವೆ.  ಅಂಚು ಗರಗಸದಂತೆ ಕಾಂಡದ ಮೇಲಿನ ಎಲೆಗಳಿಗೆ ವೃಂತಪರ್ಣ ಉಂಟು.  ಹೂಗಳು ಒಂಟಿಯಾಗಿರಬಹುದು ಇಲ್ಲವೆ ಸೈಮೋಸ್ ಅಥವಾ ಕಾರಿಂಬ್ ಮಾದರಿಯ ಗೊಂಚಲುಗಳಲ್ಲಿ ಸ್ಥಿತವಾಗಿರಬಹುದು.  ಹೂಗಳ ಬಣ್ಣ ಹಳದಿ, ಕೆಂಪು ಇಲ್ಲವೆ ಬಿಳಿ.  ಹೂಗಳು 2.5-5 ಸೆಂ.ಮೀ ಅಗಲವಾಗಿವೆ.  ಇದರಿಂದ ಬಲು ಆಕರ್ಷಕ.  ಪುಷ್ಪಪತ್ರಗಳು 5. ಕಾಯಿಯಲ್ಲೂ ಉಳಿಯುತ್ತವೆ.  ದಳಗಳು 5.  ಕೇಸರಗಳು ಹಲವಾರು.  ಹೂವಿನ ಕೇಂದ್ರ ಭಾಗದಲ್ಲಿ ಅನೇಕ ಬಿಡಿ ಕಾರ್ಪೆಲುಗಳಿಂದ ಕೂಡಿದ ಅಂಡಾಶಯ ಉಂಟು.  ಫಲ ಹಲವಾರು ಬಿಡಿ ಫಲಗಳ ಗುಚ್ಛ.  ಇವುಗಳ ಮೇಲೆ ಗರಿಯಂಥ ರಚನೆಗಳುಂಟು.

ಜೀಯಮನ್ನು ಬೀಜಗಳ ಇಲ್ಲವೆ ಬೇರು ತುಂಡುಗಳ ಮೂಲಕ ವೃದ್ಧಿüಸಲಾಗುತ್ತದೆ.  ಫಲವತ್ತಾದ ಎಂಥ ಮಣ್ಣಿನಲ್ಲೂ ಇದು ಬೆಳೆಯಬಲ್ಲದು.  ಬಿಸಿಲು ಹೆಚ್ಚಾಗಿದ್ದರೆ ಇದರ ಬೆಳೆವಣಿಗೆ ಹುಲುಸು.  ತೋಟಗಾರಿಕೆಯಲ್ಲಿ ಪ್ರಮುಖವೆನಿಸಿರುವ ಪ್ರಭೇದಗಳು ಇವು :  ರೆಪ್ಟಾನ್ಸ್, ಮಾಂಟಾನಮ್, ಕೈಲೋಯೆನ್ಸ್, ಟ್ರೈಫ್ಲೋರಮ್, ರಿವಾಲೆ ಮತ್ತು ಮ್ಯಾಕ್ರೊಫಿಲಮ್.
(ಬಿ.ಎ.ಸಿ.)
	
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ